Met the Kodagu District Collector to discuss the court order to transfer revenue department lands and revenue entries to the forest department, 24/10/2021

ಶನಿವಾರ ಒಂದು ನಿಯೋಗದೊಂದಿಗೆ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಈಗ ನಡೆಯುತ್ತಿರುವಕಂದಾಯ ಇಲಾಖೆಯ ಜಾಗಗಳ ಸರ್ವೇ ಕಾರ್ಯ ಹಾಗೂ ರೆವೆನ್ಯೂ ನಮೂದನೆಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಬೇಕು ಎನ್ನುವ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚೆ ನಡೆಸಿದೆವು. ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಜನರ ಹಿತದಲ್ಲಿ ಇಲ್ಲ. ಇದಕ್ಕೆ ಕಾರಣ ಸರ್ಕಾರ ವಿಷಯದ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸದೆ ಇರುವುದು. ಆದ ಕಾರಣ, ಸರ್ಕಾರ ವಿಷಯವಾಗಿ ಪುನರ್-ಪರಿಶೀಲನಾ ಅರ್ಜಿ (Review Petition) ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕಾರಣ ಅವರು ಸರ್ಕಾರಕ್ಕೆ ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. C ಮತ್ತು D ಜಾಗಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದ್ದನ್ನು ಹಿಂಪಡೆದು ಆದೇಶ ಮಾಡಲಾಗಿತ್ತು. ಇದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿಲ್ಲ. ಎರಡನೆಯದಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳು ಲ್ಯಾಂಡ್ ರೆವೆನ್ಯೂ ಕಾಯ್ದೆ ಪ್ರಕಾರ ಈ ಜಮೀನುಗಳನ್ನು ಅರಣ್ಯ ಎಂದು ನಮೂದಿಸುವ ಬದಲು ಲ್ಯಾಂಡ್ ಬ್ಯಾಂಕ್ ಎಂದು ನಮೂದಿಸಬೇಕೆಂದು ಆದೇಶ ಮಾಡಿದ್ದರು. ಇದನ್ನೂ ಕೂಡ ಸರ್ಕಾರ ನ್ಯಾಯಾಲಯದ ಮುಂದೆ ತಿಳಿಸಲು ವಿಫಲವಾಗಿದೆ. ಇದರೊಂದಿಗೆ ಸಾವಿರಾರು ಸಣ್ಣ ಹಿಡುವಳಿದಾರರಿಗೆ ಒಂದು ನೋಟಿಸ್ ಕೂಡ ಜಾರಿಮಾಡದೆ, ಕಾನೂನಿನ ಅನೇಕ ಅಂಶಗಳನ್ನು ಕೋರ್ಟ್ ಗಮನಕ್ಕೆ ತರದೆ, ಅವರೆಲ್ಲರನ್ನೂ ಸಂಕಷ್ಟಕ್ಕೆ ದೂಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ನಮ್ಮ ಅರ್ಜಿಯಲ್ಲಿ ಇನ್ನು ಹಲವು ವಿಷಯಗಳನ್ನು ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿ ಶೀಘ್ರ ಸಲ್ಲಿಸುವಂತೆ ಒತ್ತಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಧನ್ಯವಾದಗಳು. ನಮ್ಮ ನಿಯೋಗದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ಸೂರಜ್ ಹೊಸೂರ್, ಸ್ಥಳೀಯ ಹಿರಿಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಎಲ್ಲರಿಗೂ ಧನ್ಯವಾದಗಳು.
 
 
img