Kanchan Ponnanna Donates TV to Sneha Bhavan Old Age Home in Virajpet, 19/11/2026
ಭರವಸೆಯಂತೆ ನಡೆದು, ವೃದ್ಧಾಶ್ರಮದ ನಿವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದ ಕ್ಷಣಗಳು…
ಈ ಹಿಂದೆ ನನ್ನ ಹುಟ್ಟುಹಬ್ಬದ ಪ್ರಯುಕ್ತ ವಿರಾಜಪೇಟೆ ತಾಲೂಕು ಹೆಗ್ಗಳದಲ್ಲಿರುವ ಸ್ನೇಹ ಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಮಯ ಕಳೆದು ಅವರೊಂದಿಗೆ ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ, ಮನರಂಜನೆಗಾಗಿ ಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಿದ್ದೆ.
ಅದರಂತೆ, ಇಂದು ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರ ಮೂಲಕ ಸ್ವಂತ ವೆಚ್ಚದಲ್ಲಿ ಆಶ್ರಮಕ್ಕೆ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು. ಅಲ್ಲದೆ, ಇನ್ನೊಂದು ವಾರದೊಳಗೆ ಟೇಬಲ್ ವ್ಯವಸ್ಥೆಯನ್ನೂ ಕಲ್ಪಿಸಿಕೊಡುವ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಿಗೆ ಕೇಕ್ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಿ, ಅವರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿಯೂ ಆಶ್ರಮದ ನಿವಾಸಿಗಳಿಗೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಲಾಯಿತು.
ನಾವು ನೀಡಿದ ಭರವಸೆಯನ್ನು ಈಡೇರಿಸಿರುವುದಕ್ಕೆ ಆಶ್ರಮದ ನಿವಾಸಿಗಳು ಸಂತಸ ವ್ಯಕ್ತಪಡಿಸಿ, ಶ್ರೀಮತಿ ಕಾಂಚನ್ ಪೊನ್ನಣ್ಣ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಕೃತಜ್ಞತೆ ಸಲ್ಲಿಸಿದರು.
ವೃದ್ಧರ ಮುಖದಲ್ಲಿನ ನಗು ಮತ್ತು ಅವರ ಸಂತೃಪ್ತಿಯೇ ನಮ್ಮ ಸೇವಾ ಕಾರ್ಯಗಳಿಗೆ ನಿಜವಾದ ಪ್ರೇರಣೆ.
